ಗುರುವಾರ, ಜುಲೈ 17, 2014

ಮದುವೆಯಾಗದವರಿಗೆ ಮಾರ್ಗದರ್ಶನ.

ಇದು ಮದುವೆಯಾದವರಿಗೆ ಎಷ್ಟು ಕಷ್ಟಪಟ್ಟರೂ ಮದುವೆಯಾಗದವನೊಬ್ಬನ ಪ್ರಲಾಪದಂತೆ ತೋರೀತು. ಮದುವೆಯಾಗದವರಿಗೆ ಅನೇಕರಿಗೆ ಇಂಥ ಯೋಚನೆ ಬಂದಿರಲೂ ಬಹುದು.. ಹತಾಶನ ಮಾತಲ್ಲ.
ಅನೇಕರಿಗೆ ಮದುವೆಯ ಉದ್ದೇಶ ಗೊತ್ತಿಲ್ಲ. ಮದುವೆ ಆಗದಿದ್ದರೆ ಮುಂದಿನ ನಡೆಯ ಬಗ್ಗೆ ಅನೇಕರಿಗೆ ಕಲ್ಪನೆಯಿಲ್ಲ. ಹಾಗಾಗಿ ಮದುವೆ ಆದರೂ ಸುದ್ದಿ, ಆಗದಿದ್ದರೂ ಸುದ್ದಿಯೇ.
ನನ್ನ ಪ್ರಕಾರ ಮದುವೆ ವ್ಯಕ್ತಿಯೊಬ್ಬನ ಜೀವನದಲ್ಲಿ ಅಥವಾ ಜೀವಮಾನದಲ್ಲಿ ಆಗಲೇಬೇಕಾದ ಅನಿವಾರ್ಯ ಸಂಸ್ಕಾರವಲ್ಲ. ಅದು ಅನಿವಾರ್ಯವಾಗಿದ್ದರೆ ಉಪನಿಷತ್ತು "ಯದಹರೇವ ವಿರಜೇತ್ , ತದಹರೇವ ಪ್ರವ್ರಜೇತ್ ,ಬ್ರಹ್ಮಚರ್ಯಾದ್ವಾ ಗೃಹಾದ್ವಾ ವನಾದ್ವಾ" ಎಂದು ಹೇಳುತ್ತಿರಲಿಲ್ಲ.
ಅಂದರೆ ಬ್ರಹ್ಮಚರ್ಯದಿಂದಾಗಲೀ, ಗೃಹಸ್ಥಾಶ್ರಮದಿಂದಾಗಲೀ, ವಾನಪ್ರಸ್ಥದಿಂದಾಗಲೀ ಸನ್ಯಾಸ ಸ್ವೀಕರಿಸು. ಬ್ರಹ್ಮಚರ್ಯದಿಂದಾಗಲೀ ಎಂದದ್ದರಿಂದಲೇ ಉಪನಯನ ಸಂಸ್ಕಾರ ಕಡ್ಡಾಯ ಎಂದಂತಾಯಿತು. ( ಅದೂ ಕಡ್ಡಾಯವಲ್ಲ ಎಂದೂ ಆಗಬಹುದು "ಯದಹರೇವ" ಎಂದಿದ್ದರಿಂದ.) ಅಷ್ಟಕ್ಕೂ ಉಪನಯನ ಯಾವುದಕ್ಕೂ ಬಂಧಕವಲ್ಲ. ಮತ್ತು ಉಪನಯನವಾಗದೇ ವೇದಾಧಿಕಾರವೇ ಬರುವುದಿಲ್ಲವಾಗಿ ಉಪನಯನ ಕಡ್ಡಾಯ ಎನ್ನಬೇಕಾಗುತ್ತದೆ.. ನೇರವಾಗಿ ಬ್ರಹ್ಮಚರ್ಯದಿಂದಲೇ ಸನ್ಯಾಸಿಯಾಗಬಹುದಾದ್ದರಿಂದ ವಿವಾಹ , ವಾನಪ್ರಸ್ಥಗಳು ಕಡ್ಡಾಯವಲ್ಲ ಎಂದಂತಾಯಿತು.
ಕರ್ಮದ ದೃಷ್ಟಿಯಿಂದ ಅದು ಕಡ್ದಾಯವಾದರೂ ಜ್ಞಾನದ ದೃಷ್ಟಿಯಿಂದ ಕಡ್ದಾಯವಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಮದುವೆಯಲ್ಲಿ ಕೈಹಿಡಿಯುವ ಪತ್ನಿ ಯಜ್ಞಸಾಧನವೇ ಹೊರತೂ ಜ್ಞಾನಸಾಧನ ಅಲ್ಲ.
ಮದುವೆಯಾಗದುದು ಅವರ ದೋಷವಲ್ಲ.
ಮದುವೆಯಾದವರು ಏನು ಮಾಡಬೇಕೆಂದು ಹಿಂದಿನ ಲೇಖನ ತಿಳಿಸುತ್ತಿದೆ.
ಮದುವೆಯಾಗದವರು ಏನು ಮಾಡಬಹುದೆಂದು ತಿಳಿಯಬೇಕು...
1. ಯಾವ ಜಂಜಾಟವೂ ನಿಮಗಿಲ್ಲವೆಂದು ಸಂತೋಷಪಡಿ.
2. ಇಂದ್ರಿಯಜನ್ಯ ಸುಖಗಳು ಅನುಭವಿಸಿದಷ್ಟೂ ಬಯಕೆಗಳನ್ನು ಕೆರಳಿಸುತ್ತವೆ, ಹಾಗಾಗಿ ಇಂದ್ರಿಯ ಸುಖಗಳ ಬಯಕೆ ಬೇಡ, ಇಂದ್ರಿಯಗಳ ಉಪಶಮಕ್ಕೆ ಪ್ರಯತ್ನಿಸಿ.
3. ಬಹಿರ್ಮಖ ಇಂದ್ರಿಯಸುಖ ದೈಹಿಕ , ಅಂತರ್ಮುಖವಾದರೆ ದೈವಿಕ. ದೈಹಿಕಕ್ಕಿಂತ ದೈವಿಕಸುಖ ಮೇಲು.
4. ಎಲ್ಲ ಮಹಿಳೆಯರನ್ನೂ ತಾಯಿಯೆಂಬ ಗೌರವದಿಂದ ನೋಡಿ.
5. ಜೀವನದ ಸಾರ್ಥಕತೆಗೆ ಮದುವೆಯೊಂದೇ ಹೆದ್ದಾರಿಯೆಂಬ ಮೂಢ ನಂಬಿಕೆ ಬೇಡ.
6. ಒಬ್ಬಳ ಕೈಹಿಡಿಯುವುದಕ್ಕಿಂತ ಅಸಂಖ್ಯ ಅಶಕ್ತರ ಕೈಹಿಡಿದು ಸಹಾಯಮಾಡಿ.
7. ಕೊನೆಯದಾಗಿ ನೆನಪಿಡಿ ; ದೇವರ ದೃಷ್ಟಿಯಲ್ಲಿ ವಿವಾಹಿತ ಅವಿವಾಹಿತರೆಂಬ ತಾರತಮ್ಯವಿಲ್ಲ.
ಅವಿವಾಹಿತ ಗಂಡು ಅಥವಾ ಹೆಣ್ಣು ಇಬ್ಬರಿಗೂ    ಇದು ಅರ್ಥವಾದರೆ ಸಾಕು.

ಶನಿವಾರ, ಜೂನ್ 28, 2014

" ನನಗೆ ಹೀಗೆ ಅನಿಸುತ್ತದೆ" ಐ ಥಿಂಕ್ ಸೋ ಅಂತ ಎಲ್ರೂ ಬಳಸುತ್ತಾರೆ.. ಅವರಿಗೆ ವಿಷಯದ ಬಗೆಗಿರುವ ಅಜ್ಞಾನದ ಶಾಬ್ದಿಕರೂಪ ಈ ವಾಕ್ಯ ಎಂದು ಅದೆಷ್ಟೋ ಸಲ ಯೋಚಿಸಿದ್ದಿದೆ. ಆದರೆ ಅದು ಹಾಗೆಂದೇ ದೃಢವಾಗಿ ಹೇಳಲು ಸಾಧ್ಯವಿಲ್ಲ.. ಮೃದು ಮಾತಿನ ವ್ಯಕ್ತಿಯೊಬ್ಬ ತನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವ ಮನಸ್ಸಾಗದೇ ಬಳಸುವ ವಾಕ್ಯ ಎಂದೂ ಅಂದುಕೊಳ್ಳಬಹುದು.
ಅನಿಸಿಕೆ ವ್ಯಕ್ತಪಡಿಸುವ ಕಾಲಕ್ಕೆ ಅದು ಸತ್ಯ , ಅರ್ಧಸತ್ಯ , ಅಥವಾ ಅಸತ್ಯ ಆಗಿರಲೂ ಬಹುದು. " ಕಾಲಾನುಕಾಲಕ್ಕೆ ತಾ ಬಡವಂ ಬಲ್ಲಿದನಾಗನೇ? " ಎಂಬಂತೆ ಅದೇ ಸತ್ಯವಾದೀತು.
ಅನೇಕರಿಗೆ ಅನಿಸಿದ್ದು-   " ಕಾಳಿದಾಸನ ಕಾಲಕ್ಕೆ 'ಪುರಾಣಮಿತ್ಯೇವ ನ ಸಾಧು ಸರ್ವಂ ' ಸರಿ ಒಪ್ಕೋತಿವಿ. ಆದ್ರೆ ಈಗಿನ ನವ್ಯತೆಯ ಪರಿಯನ್ನು  ನೋಡಿ " ಓಲ್ಡ್ ಈಸ್ ಗೋಲ್ಡ್ " ಅನ್ನೋದೇ ಸರಿ.
ಅಂದ್ರೆ ಎಲ್ರೂ ಅವರವರ ಅನಿಸಿಕೆ ಹೇಳ್ತಾರೆ , ಅವೇ ಮುಂದೆ " ಸಾರ್ವಕಾಲಿಕ ಸತ್ಯ" ಅಂತ ಅನ್ನಿಸಿಕೊಳ್ಳುತ್ತವೆ.
ಹಾಗಾಗಿ ಯಾರೂ ಅಭಿಪ್ರಾಯವನ್ನು ಮುಚ್ಚಿಡಬಾರದು.
ಯಾರಿಗೆ ಗೊತ್ತು ಯಾರ ಯಾವ ಮಾತು ಮುಂದೊಂದು ದಿನ ಜಗತ್ತು ಕೊಂಡಾಡುವ ಮಾತಾಗುತ್ತದೆ ಅಂತ.